ಕೊಡೈಕ್ಕಾನಲ್ ವೀಕ್ಷಣಾಲಯ

ಇದನ್ನು ಈಸ್ಟ್ ಇಂಡಿಯ ಕಂಪನಿಯವರು ಮದ್ರಾಸು ನಗರದಲ್ಲಿ 1791ರಲ್ಲಿ ಸ್ಥಾಪಿಸಿದರು. ನಕ್ಷತ್ರವೀಕ್ಷಣೆ, ವರದಿ ಸಂಗ್ರಹಣೆ, ನಾವಿಕರಿಗೆ ಅವಶ್ಯಮಾಹಿತಿಗಳ ಪೂರೈಕೆ ಪ್ರಧಾನೋದ್ದೇಶಗಳು. ಪೋಗ್‍ಸನ್ ಎಂಬಾತನ ಹಿರಿತನದಲ್ಲಿ ರಘುನಾಥಾಚಾರಿಯವರ ನೆರವಿನಿಂದ ಈ ವೀಕ್ಷಣಾಲಯ ಅಂದು ಗಮನಾರ್ಹಪ್ರಗತಿಯನ್ನು ಸಾಧಿಸಿತು-ಹಲವಾರು ಕ್ಷುದ್ರಗ್ರಹಗಳನ್ನೂ (ಮೈನರ್ ಪ್ಲಾನೆಟ್ಸ್) ಚಂಚಲ ನಕ್ಷತ್ರಗಳನ್ನೂ (ಮೇರಿಯಬಲ್ ಸ್ಟಾರ್ಸ್) ಶೋಧಿಸಿ ವರದಿಮಾಡಿದ ಹಿರಿಮೆ ಈ ವೀಕ್ಷಣಾಲಯದ್ದು.

19ನೆಯ ಶತಮಾನದ ಕೊನೆಯ ದಶಕದಲ್ಲಿ ಖಗೋಳಭೌತಶಾಸ್ತ್ರ ತೀವ್ರವಾಗಿ ಬೆಳೆದು ಹೊಸ ಅಂತಸ್ತನ್ನು ಪಡೆಯಿತು. ಅದೇ ವೇಳೆಗೆ ಮದರಾಸಿನ ಈ ವೀಕ್ಷಣಾಲಯವನ್ನು ನವೀಕರಿಸಿ ಖಭೌತ ವೀಕ್ಷಣೆಗಳನ್ನು ಬೃಹತ್ಪ್ರಮಾಣದಲ್ಲಿ ಮಾಡುವಂತೆ ಅಳವಡಿಸಿ ಕೊಡೈಕ್ಕಾನಲಿಗೆ ವರ್ಗಾಯಿಸಿದರು (1898). ಸೂರ್ಯನ ಆವರಣದ ಶಾಸ್ತ್ರೀಯ ಅಭ್ಯಾಸ ಇದರ ಪ್ರಧಾನ ಗುರಿ. ಅಂದಿನಿಂದ ಈ ದಿಶೆಯಲ್ಲಿ ಕೊಡೈಕ್ಕಾನಲಿನ ಸೌರಭೌತವೀಕ್ಷಣಾಲಯ (ಸೋಲಾರ್ ಫಿಸಿಕಲ್ ಆಬ್ಸರ್ವೇಟರಿ-ಈ ಹೆಸರಿನಿಂದ ಇದನ್ನು ಕರೆಯುವುದುಂಟು). ತನ್ನ ಹೆಸರನ್ನು ಸಾರ್ಥಕಗೊಳಿಸುವಂಥ ಸಾಧನೆಗಳನ್ನು ಸಿದ್ಧಿಸಿವೆ. 1904ರಿಂದ ತೊಡಗಿ ಇಂದಿನವರೆಗಿನ ಸೂರ್ಯನ ವರ್ಣಗೋಳದ (ಕ್ರೋಮೋಸ್ಫಿಯರ್) ವರ್ತನೆಯ ಪೂರ್ಣ ಮಾಹಿತಿಗಳ ಸಂಗ್ರಹ ಇಂಥ ಒಂದು ಸಿದ್ಧಿ. ಪ್ರಪಂಚದ ಇನ್ನು ಎರಡು ವೀಕ್ಷಣಾಲಯಗಳಲ್ಲಿ ಮಾತ್ರ ಇವು ಲಭ್ಯವಷ್ಟೆ..

40" ವ್ಯಾಸದ ದೂರದರ್ಶಕ ಇಲ್ಲಿದೆ. 1957ರಿಂದ ಈಚೆಗೆ ಈ ವೀಕ್ಷಣಾಲಯದಲ್ಲಿ ಸೌರರೇಡಿಯೋ ವಿಸರಣಗಳ ಬಗ್ಗೆ ಮುನ್ಸೂಚನೆಗಳನ್ನು ಕೊಡುವ ಕೆಲಸ ನಡೆದಿದೆ. ಸೆಕೆಂಡಿಗೆ 100ಮೆಗಾಸೈಕಲ್ಲುಗಳ ಮತ್ತು 3,000 ಮೆಕಾಸೈಕಲ್ಲುಗಳ ಸೌರಅಭಿವಾಹವನ್ನು (ಸೋಲಾರ್ ಫ್ಲಕ್ಸ್) ದಾಖಲುಮಾಡಿಕೊಳ್ಳುವಂಥ ಸೌಲಭ್ಯವುಂಟು. ನಮ್ಮ ಆಕಾಶಗಂಗೆಯ ಹೊರಗಿರುವ ಇತರ ಬ್ರಹ್ಮಾಂಡಗಳಿಂದ (ಗ್ಯಾಲಾಕ್ಸೀಸ್) ಬರುತ್ತಿರುವ ವಿಸರಣಗಳ ಅಧ್ಯಯನವನ್ನೂ ಕಳೆದ 3-4 ವರ್ಷಗಳಿಂದ ಈ ವೀಕ್ಷಣಾಲಯದಲ್ಲಿ ಮಾಡುತ್ತಿದ್ದಾರೆ ಮತ್ತು ನಾಕ್ಷತ್ರಿಕ ಶುದ್ಧಗತಿ ವಿಜ್ಞಾನದಲ್ಲಿ (ಸ್ಟೆಲ್ಲಾರ್ ಕೈನ್ಮ್ಯಾಟಿಕ್ಸ್) ಸಂಶೋಧನೆಗಳು ಇಲ್ಲಿ ನಡೆದಿವೆ. 50 ಸೆಂಮೀ. ಅಳತೆಯ ಪ್ರತಿಫಲಿಸುವ (ರಿಫ್ಲೆಕ್ಟರ್) ದೂರದರ್ಶಕ ಮತ್ತು ಕಡಿಮೆ ವರ್ಣವಿಭಜನಸಾಮಥ್ರ್ಯವಿರುವ ಕ್ಯಾಸಿಗ್ರೇನ್ ರೋಹಿತಲೇಖಿಗಳ (ಸ್ಟೆಕ್ಟ್ರೋಸ್ಕೋಪ್) ಸಾಧನಗಳೊಂದಿಗೆ ಈ ಸಂಶೋಧನೆಗಳು ಸಾಧ್ಯವೆನಿಸಿವೆ. ಧೂಮಕೇತುಗಳ ಗೊಂಡೆಗಳಿಗೆ ಹಾಗೂ ಬಾಲಗಳಿಗೆ ಸಂಬಂಧಿಸಿದಂತೆ ಅವುಗಳ ತೀಕ್ಷ್ಣತೆ ಧ್ರುವೀಕರಣ ವೈಚಿತ್ರ್ಯಗಳ ಅಧ್ಯಯನವೂ ಈ ವೀಕ್ಷಣಾಲಯದಲ್ಲಿ ನಡೆದಿದೆ. ಸೂರ್ಯನಿಂದ ಜನಿತವಾದುದೆಂದು ಹೇಳಲಾದ ಅಯಾನುಗೋಳ ಮತ್ತು ಭೂಕಾಂತ ಪರಿಣಾಮಗಳ ವೀಕ್ಷಣೆಗೆ ಸಂಬಂಧಿಸಿದಂತೆ ಸೂರ್ಯ-ಭೂಮಿ (ಸೋಲಾರ್ ಟೆರ್ರೆಸ್ಟ್ರಿಯಲ್) ಪ್ರಯೋಗಶಾಲೆಯೊಂದನ್ನು ಈ ವೀಕ್ಷಣಾಲಯದ ವತಿಯಿಂದ ಸ್ಥಾಪಿಸಲಾಗಿದೆ. ಭೂಕಾಂತ ಸಮಭಾಜಕ ವೃತ್ತಕ್ಕೆ ಕೊಡೈಕ್ಕಾನಲ್ ಸಮೀಪವಿರುವುದೇ ಇಂಥ ವಿಷಯಗಳನ್ನು ಕುರಿತ ವಿಶೇಷಾಧ್ಯಯನಕ್ಕೆ ಕಾರಣ. ಆಯಾನುಗೋಳ ಮತ್ತು ತತ್ಸಂಬಂಧೀ ವಾತಾವರಣ ಪ್ರದೇಶಗಳ ಗುಣಲಕ್ಷಣಗಳ ಅಧ್ಯಯನವನ್ನು ಕೊಡೈಕಾನೆಲ್ ವೀಕ್ಷಣಾಲಯ ನಡೆಸಿದೆ. ಸೂರ್ಯನಿಂದ ಹೊರಬರುವ ವಿಸರಣಗಳ ವಿಶೇಷವಾಗಿ ರೋಹಿತದ ಅತಿನೇರಿಳೆ ಮತ್ತು ಎಕ್ಸ್‍ಕಿರಣ ಸ್ಥಳಗಳಲ್ಲಿ-ವರ್ತನೆಯನ್ನು ಶೋಧಿಸಲು ಅಯಾನುಗೋಳವನ್ನು ಒಂದು ಶೋಧಕವನ್ನಾಗಿ ಬಳಸಿಕೊಳ್ಳಲು ಇಲ್ಲಿ ಪ್ರಯತ್ನ ನಡೆಸಲಾಗಿದೆ.

	ಕಳೆದ 180 ವರ್ಷಗಳಿಂದಲೂ ಕೊಡೈಕ್ಕಾನಲ್ ಖಗೋಳ ವೀಕ್ಷಣಾಲಯ ಖಗೋಳಾಧ್ಯಯನಕ್ಕೆ ವಿಶೇಷ ಗಮನಕೊಟ್ಟು ಸತತವಾಗಿ ಶ್ರಮಿಸುತ್ತಿದೆ. ಭಾರತದಲ್ಲೇ ಅತ್ಯಂತ ಹಿರಿಯ ವೈಜ್ಞಾನಿಕ ವೀಕ್ಷಣಾಲಯವಾಗಿರುವ ಈ ಕೇಂದ್ರದ ಆಶ್ರಯದಲ್ಲಿ ಮತ್ತೊಂದು ವೀಕ್ಷಣಾಲಯ ಕೇಂದ್ರ ಕಾವಲೂರಿನಲ್ಲಿ ಸ್ಥಾಪಿತವಾಗಲಿದ್ದು ಅಲ್ಲಿಯೂ ಅಧಿಕಪ್ರಮಾಣದ ಸಂಶೋಧನಾಧ್ಯಯನಗಳನ್ನು ನಡೆಸಲು ಯೋಜಿಸಲಾಗಿದೆ.  ಇಂದು ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಅಸ್ಟ್ರೋಫಿಸಿಕ್ಸ್ ಎಂಬ ಹೆಸರು ಪಡೆದಿರುವ ಸಂಸ್ಥೆಯ ಉಗಮವೇ ಈ ವೀಕ್ಷಣಾಲಯ.      				 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ